ಅಬ್ದುಲ್ ಹಸನ್

	ಗೋಲ್ಕೊಂಡದ ಕುತುಬ್‍ಷಾಹಿ ಸುಲ್ತಾನರಲ್ಲಿ ಕೊನೆಯವ. ಔರಂಗಜೇಬ ಬಿಜಾಪುರವನ್ನು ಸ್ವಾಧೀನಪಡಿಸಿಕೊಂಡು (1686) ಷಿಯಾ ರಾಜ್ಯವಾಗಿದ್ದ ಗೋಲ್ಕೊಂಡದ ಕಡೆ ಸೈನ್ಯ ಕಳುಹಿಸಿದ. ಮರುವರ್ಷ ತಾನೇ ಹೋಗಿ ಮುತ್ತಿಗೆ ಪ್ರಾರಂಭಿಸಿದ್ದ ಸೈನ್ಯದೊಡನೆ ನಿಂತ. ಕೋಟೆಯೊಳಗೆ ಸಾಕಾದಷ್ಟು ಆಹಾರಪದಾರ್ಥಗಳಿದ್ದುದರಿಂದ ಅಲ್ಲಿನ ಸೈನಿಕರು ಮೊಗಲ್ ಸೈನ್ಯದ ಮುತ್ತಿಗೆಯನ್ನು ಧೈರ್ಯದಿಂದ ಎದುರಿಸಿದರು. ಎಂಟು ತಿಂಗಳು ಕಳೆದರೂ ಗೋಲ್ಕೊಂಡ ಔರಂಗಜೇಬನ ಕೈವಶವಾಗಲಿಲ್ಲ. ಅಜೇಯವೆಂದೆನಿಸಿಕೊಂಡಿದ್ದ ಆ ಕೋಟೆ ಕೊನೆಗೆ ಗೋಲ್ಕೊಂಡದ ಸೈನ್ಯದಲ್ಲಿದ್ದ ಅಬ್ದುಲ್ಲಾ ಪಾನಿ ಎಂಬ ಆಫ್ಘನ್ ಸೈನಿಕನ ದ್ರೋಹದ ಫಲವಾಗಿ ಮೊಗಲರ ಕೈವಶವಾಯಿತು. ಅಬ್ದುಲ್ ಹಸನ್ ಪದಚ್ಯುತನಾಗಿ ದೌಲತಾಬಾದ್ ಕೋಟೆಯಲ್ಲಿ ಇರಬೇಕಾಯಿತು.														

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ